ಆಕಾಶಗಂಗೆ -
ವಿಶ್ವದಲ್ಲಿರುವ ಹಲವಾರು ಬ್ರಹ್ಮಾಂಡಗಳಲ್ಲಿ (ಗ್ಯಾಲಾಕ್ಸೀಸ್) ಸೂರ್ಯ ಇರುವ ಬ್ರಹ್ಮಾಂಡ (ಮಿಲ್ಕೀವೇ). ಸ್ಥಳೀಯ ಬ್ರಹ್ಮಾಂಡ, ಕ್ಷೀರಪಥ, ಬಾಂದೊರೆ ಪರ್ಯಾಯ ಪದಗಳು.

   
 ವ್ಯಾಪ್ತಿ :  
ಬರಿಗಣ್ಣಿನಿಂದ ಆಕಾಶಗಂಗೆಯನ್ನು ನೋಡಬಹುದು. ಆಕಾಶದ ದಕ್ಷಿಣದಿಂದ ಉತ್ತರದ ಕಡೆಗೆ ಪಸರಿಸಿರುವ ಈ ಮಂದ ಪ್ರಕಾಶದ ಬೆಳಕಿನ ಪಟ್ಟಿಯಲ್ಲಿ ಸುಮಾರು 1011 ನಕ್ಷತ್ರಗಳು ಇರಬಹುದೆಂದು ಅಂದಾಜು. ಲಘುಶ್ವಾನ (ಕೆನಿಸ್‍ಮೈನರ್), ಮಹಾವ್ಯಾಧ (ಒರೈಯನ್), ಮಿಥುನ (ಜೆಮಿನಿ), ವೃಷಭ (ಟಾರಸ್), ಆರಿಗಾ, ಪರ್ಸಿಯಸ್, ಕೆಸಿಯೋಪಿಯ, ಆಂಡ್ರೊಮಿಡ, ಸಿಫಿಯುಸ್, ಸಿಗ್ನಸ್, ಅಕ್ವಿಲಾ, ಧನು (ಸಜಿಟ್ಟೇರಿಯಸ್), ವೃಶ್ಚಿಕ (ಸ್ಕಾರ್ಪಿಯೋ), ಸೆಂಟಾರಸ್, ಕ್ರಕ್ಸ್, ಕರಿನಾ, ವೇಲಾ ಪಪ್ಪಿಸ್, ಮಹಾಶ್ವಾನ (ಕೆನಿಸ್ ಮೇಜರ್) ಮುಂತಾದ ನಕ್ಷತ್ರ ಪುಂಜಗಳನ್ನು ಆಕಾಶಗಂಗೆ ಒಳಗೊಂಡಿದೆ. ಸಿಗ್ನಸ್ ನಕ್ಷತ್ರಪುಂಜದ ಬಳಿ ಆಕಾಶಗಂಗೆಯ ಪ್ರಕಾಶ ಸ್ವಲ್ಪ ಹೆಚ್ಚು. ಅಲ್ಲಿ ಈ ಬೆಳಕಿನ ಹೊನಲು ಎರಡು ಕವಲಾಗಿ ಒಡೆದು ಸ್ಕೂಟಂ ಮತ್ತು ಓಫಿಯೂಕಸ್ ಪುಂಜಗಳನ್ನು ದಾಟಿ ವೃಶ್ಚಿಕ - ಧನು ರಾಶಿಗಳ ಮೂಲಕ ಒಂದೊಂದು ಕವಲೂ ದಕ್ಷಿಣಕ್ಕೆ ಸಾಗುವುದು. ಆರ್ಗೋ ಮತ್ತು ಸೆಂಟಾರಸ್ (ದಕ್ಷಿಣಾಕಾಶ) ಪುಂಜಗಳ ವಲಯದಲ್ಲಿ ಆಕಾಶಗಂಗೆಯ ಪ್ರಕಾಶ ಅಧಿಕತಮ. ವೃಶ್ಚಿಕ ಮತ್ತು ಧನು ರಾಶಿಗಳ ಸಮೀಪ ಇದರ ಅಗಲ ಪರಮಾವಧಿ, ಸುಮಾರು 400. 

ದೂರದರ್ಶಕಗಳ ಮೂಲಕ ನೋಡುವಾಗ ಅಥವಾ ಫೋಟೋಗ್ರಾಫ್ ತೆಗೆದು ಪರೀಶಿಲಿಸುವಾಗ ಆಕಾಶಗಂಗೆ ಅಸಂಖ್ಯಾತ ಸ್ಪಷ್ಟ ಆದರೆ ಕ್ಷೀಣ ನಕ್ಷತ್ರಗಳಿಂದಲೂ ನೆಬ್ಯುಲಗಳಿಂದಲೂ ಅಂತರ ನಾಕ್ಷತ್ರಿಕ ದೂಳು, ಅನಿಲಗಳಿಂದಲೂ ಕೂಡಿದೆ ಎಂದು ತಿಳಿಯಿತು. ದೂಳಿನ ರಾಶಿ ಕೆಲವೆಡೆ ದಟ್ಟವಾಗಿ ಮಳೆ ಮೋಡದಂತೆ ಕಪ್ಪಾಗಿ ವ್ಯಾಪಿಸಿದೆ. ಸಮೀಪದ ನಕ್ಷತ್ರಗಳ ಪ್ರಕಾಶದಿಂದ ಇವುಗಳ ಅಸ್ತಿತ್ವ ತಿಳಿಯಬಹುದು. ಕೆಲವು ನೆಬ್ಯುಲಾಗಳ ನಡುವೆ ಬೂದಿಯ ನಡುವಿನ ಕೆಂಡದಂತೆ ನಕ್ಷತ್ರಗಳು ಹುದುಗಿವೆ. ಅಚ್ಚ ಕಪ್ಪುಬಣ್ಣದ ನೆಬ್ಯುಲಾಗಳು ನಮ್ಮ ಸಮೀಪ ಇವೆ. (300-1500 ಜ್ಯೋತಿರ್ವರ್ಷಗಳು). ಸುಮಾರು 5000 ಜ್ಯೋತಿರ್ವರ್ಷ ದೂರದಲ್ಲಿರುವ ಕಪ್ಪು ನೆಬ್ಯುಲಾ ಮಹಾವ್ಯಾಧ ಪುಂಜದ ಖಡ್ಗದ ಹಿಂದೆ ಇದೆ. ದೂರದರ್ಶಕ ವೀಕ್ಷಣೆಗೆ ಇದು ಹಸಿರು ಬಣ್ಣದ ಮೋಡದಂತೆ ಕಾಣುವದು (ಆಂಡ್ರೊಮಿಡ ನೆಬ್ಯುಲಾ ಆಕಾಶಗಂಗೆಯ ಅಂಶವಲ್ಲ). 

 ಆಕಾರ :  
ಖಗೋಳವನ್ನು ಪೂರ್ಣ ಸುತ್ತುವರಿದಿರುವ ಆಕಾಶಗಂಗೆಯಲ್ಲಿ ಒಂದು ಕಾಲ್ಪನಿಕ ಮಹಾವೃತ್ತವಿದೆಯೆಂದು ಭಾವಿಸಬಹುದು. ಈ ಮಹಾವೃತ್ತದ ಹೆಸರು ಬ್ರಹ್ಮಾಂಡವಿಷುವದ್ವøತ್ತ (ಗ್ಯಾಲಾಕ್‍ಟಿಕ್ ಇಕ್‍ವೇಟರ್). ಇದರ ಉತ್ತರ ಧ್ರುವದ ನಿರ್ದೇಶಕಗಳು: ವಿಷುವದಂಶ (ರೈಟ್ ಅಸೆನ್‍ಷನ್) 12 ಗಂ. 40 ಮಿ. ಮತ್ತು ಘಂಟಾವೃತ್ತಾಂಶ (ಡೆಕ್‍ಲಿನೇಷನ್) 280 ಉ. ಖಗೋಳೀಯ (ಸೆಲೆಸ್ಟಿಯಲ್) ಮತ್ತು ಬ್ರಹ್ಮಾಂಡವಿಷುವದ್ವøತ್ತಗಳು ಅಕ್ವಿಲಾ ಪುಂಜದ ಬಳಿ ಸಂಧಿಸುತ್ತವೆ. ಆಕಾಶಗಂಗೆಯ ಆಕಾರವನ್ನು ಯಾವುದೇ ವಿಧದ ಪ್ರತ್ಯಕ್ಷ ಕ್ರಮದಿಂದ ನಿರ್ಧರಿಸುವುದು ಸಾಧ್ಯವಿಲ್ಲ. ಈ ಮಹಾ ವೈಶಾಲ್ಯದ ಅತ್ಯಲ್ಪಾಂಶ ಸೂರ್ಯ; ಅದರ ಅತ್ಯಲ್ಪಾಂಶ ಭೂಮಿಯ ಮೇಲಿನ ಮಾನವ; ಸಮುದ್ರದೊಳಗಿನ ಕ್ರಿಮಿ ಸಮುದ್ರದ ಆಕಾರ ತಿಳಿಯಲು ಮಾಡಿದ ಯತ್ನದಂತೆ. ಅಪ್ರತ್ಯಕ್ಷ ವಿಧಾನಗಳಿಂದ ಇದನ್ನು ನಿರ್ಧರಿಸಿದ್ದಾರೆ. ವಿಲಿಯಂ ಹರ್ಷೆಲ್ (18ನೆಯ ಶತಮಾನ) ಈ ದಾರಿಯಲ್ಲಿ ಮೊದಲ ಹೆಜ್ಜೆ ಇಟ್ಟ ಖಗೋಳಶಾಸ್ತ್ರಜ್ಞ. ದೂರದರ್ಶಕದಿಂದ ಆಕಾಶದ ವಿವಿಧ ವಲಯದಲ್ಲಿ ಕಾಣುವ ಬಿಡಿ ನಕ್ಷತ್ರಗಳ ಸಂಖ್ಯೆಯನ್ನು ಆತ ಎಣಿಸಿದ. ವಲಯ-ನಕ್ಷತ್ರಸಂಖ್ಯೆ ಕೋಷ್ಟಕ ಸಿದ್ಧಪಡಿಸಿ ಪರಿಶೀಲಿಸಿದಾಗ ನಕ್ಷತ್ರಗಳ ವಿತರಣೆಯಲ್ಲಿ (ಡಿಸ್ಟ್ರಿಬ್ಯೂಷನ್) ಒಂದು ವಿಶೇಷತೆ ಕಂಡ. ಬ್ರಹ್ಮಾಂಡ ವಿಷುವದ್ವøತ್ತದ ಧ್ರುವಗಳಿಂದ ಆಕಾಶಗಂಗೆಯೆಡೆಗೆ ಸರಿದಂತೆ ನಕ್ಷತ್ರಗಳ ಸಂಖ್ಯೆ ವಿಪರೀತವಾಗಿ ವೃದ್ಧಿಸುತ್ತದೆ; ಮತ್ತು ಇಂಥ ವೃದ್ಧಿ ಉಜ್ಜ್ವಲ ನಕ್ಷತ್ರಗಳಿಗಿಂತಲೂ ವಿಶೇಷವಾಗಿ ಕ್ಷೀಣ ನಕ್ಷತ್ರಗಳನ್ನು ಕುರಿತು ಗಮನಾರ್ಹವಾಗಿದೆ. ಬರಿಗಣ್ಣಿನಿಂದ ನೋಡುವಾಗ ಸಮಗ್ರ ಆಕಾಶದಲ್ಲಿ ಯಾದೃಚ್ಛಿಕವಾಗಿ ನಕ್ಷತ್ರಗಳನ್ನು ಚೆಲ್ಲಿದಂತೆ ಕಂಡರೂ ದೂರದರ್ಶಕ ವೀಕ್ಷಣೆಯಲ್ಲಿ ಇದರಲ್ಲೂ ಒಂದು ಕ್ರಮಬದ್ಧತೆ ಇದೆ; ಬ್ರಹ್ಮಾಂಡವಿಷವದ್ವøತ್ತದೆಡೆಗೆ ನಕ್ಷತ್ರ ಸಾಂದ್ರತೆಯ ಪ್ರಮಾಣ ನಕ್ಷತ್ರಗಳ ಕಾಂತಿಯ ವಿಲೋಮಾನುಪಾತದಲ್ಲಿ ಎಂದು ತಿಳಿದು ಬಂದದ್ದು ಹೊಸ ಅನ್ವೇಷಣೆಗೆ ಪ್ರಚೋದನೆ ನೀಡಿತು.

ಅಮೆರಿಕದ ಖಗೋಳ ವಿಜ್ಞಾನಿ ಸಿಯರ್ನ್, ಬ್ರಹ್ಮಾಂಡಅಕ್ಷಾಂಶದ (ಗ್ಯಾಲಾಕ್ಟಿಕ್ ಲ್ಯಾಟಿಟ್ಯೂಡ್) ಬೇರೆ ಬೇರೆ ಬೆಲೆಗಳಲ್ಲಿ ಹೆಚ್ಚು ಹೆಚ್ಚು ಶಕ್ತಿಯುತ ಕ್ಯಾಮರಾಗಳಿಂದ ನಕ್ಷತ್ರಗಳ ಫೋಟೋಗ್ರಾಫ್ ತೆಗೆದು ಒಂದು ಕೋಷ್ಟಕ ತಯಾರಿಸಿದ. ಈ ಕೋಷ್ಟಕ ಮೇಲೆ ವಿವರಿಸಿದ ಆಕಾಶಗಂಗೆಯ ವೈಶಿಷ್ಟ್ಯಕ್ಕೆ ತಾತ್ತ್ವಿಕ ಹಿನ್ನಲೆ ಒದಗಿಸಿತು; ಆಕಾಶಗಂಗೆ ನಕ್ಷತ್ರಗಳ ನಿಬಿಡಸಮೂಹ; ಇದರ ಆಕಾರ ಚಪ್ಪಟೆ ತಟ್ಟೆಯಂತಿದೆ; ಸೂಂiÀರ್i ಇದರಲ್ಲಿ ಒಂದು ಅಂಶ ಎಂದು ದೃಢಪಟ್ಟಿತು.

 ಸೂರ್ಯನ ಸ್ಥಾನ : 
ಆಕಾಶಗಂಗೆಯ ಕೇಂದ್ರದಲ್ಲಿ ಸೂರ್ಯ ಇರಬಹುದೆಂದು ಹರ್ಷೆಲ್ ಮೊದಲು ಭಾವಿಸಿದ್ದ. ಆದರೆ ಮುಂದಿನ ವೀಕ್ಷಣೆಗಳು ಸೂರ್ಯನಿಗೆ ಇಂಥ ಅಗ್ರಸ್ಥಾನವೀಯಲು ಯಾವ ಸಮರ್ಥನೆಯನ್ನೂ ಒದಗಿಸಲಿಲ್ಲ. ಧನೂರಾಶಿಯ ಕಡೆಗೆ ವೀಕ್ಷಿಸಿದಾಗ ಆಕಾಶಗಂಗೆಯ ನಕ್ಷತ್ರಗಳು ನಿಬಿಡವಾಗಿವೆ; ವಿರುದ್ಧ ದಿಕ್ಕಿನಲ್ಲಿ (ಅರಿಗಾ ಪುಂಜದೆಡೆಗೆ) ನೋಡಿದಾಗ ಅವು ವಿರಳವಾಗಿವೆ. ಇದರ ಅರ್ಥವಾಗಲು ದೊಡ್ಡ ವರ್ತುಲಾಕಾರದ ಮೈದಾನದ ಕೇಂದ್ರದಲ್ಲಿ ಒಂದು ಆಟ ನಡೆಯುತ್ತಿದೆ ಎಂದು ಭಾವಿಸೋಣ. ಅದನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದಾರೆ. ಕೇಂದ್ರದಲ್ಲಿ ಅದರ ನಿಬಿಡತೆ ಅತಿ ಹೆಚ್ಚು; ಹೊರಅಂಚಿನಲ್ಲಿ ಅತಿ ವಿರಳ. ಕೇಂದ್ರದಲ್ಲಿ ನಿಂತಿರುವ ಒಬ್ಬ ಮನುಷ್ಯ ಯಾವ ಕಡೆ ನೋಡಿದರು ಅವನಿಗೆ ಒಂದೇ ವಿಧವಾದ ಜನಸಂದಣಿ ಕಾಣುವುದು. ಸುಮಾರು ಹೊರಅಂಚಿನ ಸಮೀಪ ನಿಂತವನಿಗೆ ಈ ಅನುಭವ ಆಗುವದಿಲ್ಲ-ಕೇಂದ್ರದೆಡೆಗೆ ನೋಡಿದಾಗ ಅತಿ ಜನಸಂದಣಿಯನ್ನೂ ಅಂಚಿನೆಡೆಗೆ ತಿರುಗಿದಾಗ ವಿರಳತೆಯನ್ನೂ ಕಾಣುತ್ತಾನೆ. ಸೂರ್ಯನ ಸ್ಥಾನ ಆಕಾಶ ಗಂಗೆಯ ಸುಮಾರು ಅಂಚಿನೆಡೆ ಇರುವುದರಿಂದ ಮೇಲಿನ ಅನುಭವ ನಮಗೆ ಆಗುವುದು.

ಎರಡು ತಟ್ಟೆಗಳನ್ನು ಒಂದರಮೇಲೆ ಇನ್ನೊಂದನ್ನು ಕವುಚಿಟ್ಟರೆ ದೊರೆಯುವಂಥ ಘನಾಕೃತಿ ಆಕಾಶಗಂಗೆಯದು -ಮಧ್ಯೆ ಉಬ್ಬಿಕೊಂಡಿದೆ, ಅಂಚುಗಳಲ್ಲಿ ತೆಳುವಾಗುತ್ತ ಹೋಗುವುದು; ಇದನ್ನು ಆವರಿಸಿ ಸುರಳಿ ಕೈಗಳಿವೆ. ಆಕಾಶಗಂಗೆಯ ಕೇಂದ್ರ ಧನೂರಾಶಿಯ ದಿಕ್ಕಿನಲ್ಲಿ ( ಬ್ರಹ್ಮಾಂಡ ರೇಖಾಂಶ 3250) ಇದೆ; ವ್ಯಾಸ ಸುಮಾರು 1,00,000 ಜ್ಯೋತಿರ್ವರ್ಷಗಳು; ನಡುವಿನ ಉಬ್ಬಿದ ಭಾಗದ ದಪ್ಪ 3,000-4,000 ಜ್ಯೋತಿರ್ವರ್ಷಗಳು; ಆಕಾಶಗಂಗೆಯ ಕೇಂದ್ರಿಯ ನಿಬಿಡ ನಕ್ಷತ್ರವಲಯದ ದಪ್ಪ 8,000-10,000 ಜ್ಯೋತಿವರ್ಷಗಳು; ಅಲ್ಲಿಂದ ಮುಂದೆ ನಕ್ಷತ್ರಗಳ ವಿತರಣೆ ವಿರಳವಾಗುತ್ತ, ಅಂಚಿನೆಡೆಗೆ ಸಾಗಿದಮತೆ ತೀರ ತೆಳುವಾಗಿತ್ತದೆ. ಕೇಂದ್ರದಿಂದ ಸೂರ್ಯನ ದೂರ 30,000 ಜ್ಯೋತಿರ್ವರ್ಷಗಳು. ಸೂರ್ಯ ಆಕಾಶಗಂಗೆಯ ಸಮತಲದಿಂದ ಉತ್ತರಕ್ಕೆ ಕೋಮ್ ಪುಂಜದೆಡೆಗೆ 100 ಜ್ಯೋತಿರ್ವರ್ಷಗಳ ದೂರದಲ್ಲಿದೆ.

  
 ಆವರ್ತನೆ :  
ಆಕಾಶಗಂಗೆ (ಅಂದರೆ ಇದರೊಳಗೆ ಅಡಕವಾಗಿರುವ ಸಕಲ ನಕ್ಷತ್ರ, ನೆಬ್ಯುಲ ಮುಂತಾದವು) ತನ್ನ ಕೇಂದ್ರದ ಸುತ್ತಲೂ ನಿರಂತರವಾಗಿ ಆವರ್ತಿಸುತ್ತಿದೆ. ಒಂದು ಉಬ್ಬಿದ ತಟ್ಟೆ ತನ್ನ ಕೇಂದ್ರದ ಸುತ್ತಲೂ ಆವರ್ತಿಸುವಾಗ ತಟ್ಟೆಯ ಮೇಲಿನ ವಿವಿಧ ಬಿಂದುಗಳ ಸಾಪೇಕ್ಷ ಸ್ಥಾನಗಳು ಬದಲಾಗುವುದಿಲ್ಲ. ತಟ್ಟೆ ದೃಢವಸ್ತು ಆಗಿರುವದು ಇದರ ಕಾರಣ. ಆದರೆ ಆಕಾಶಗಂಗೆ ದೃಢವಸ್ತುವಲ್ಲ. ಅಸಂಖ್ಯಾತ ಆಕಾಶಕಾಯಗಳು ಪರಸ್ಪರ ಗುರುತ್ವಾಕರ್ಷಣೆಗಳಿಂದ ಬಂಧಿತವಾಗಿ ಸಡಿಲವಾಗಿ ಜೋಡಣೆಗೊಂಡು ಒಂದೆಡೆ ಕಲೆತಿರುವ ವ್ಯವಸ್ಥೆ. ಇಂಥ ವ್ಯವಸ್ಥೆಯ ಆವರ್ತನೆಯ ನಿಯಮದ ಪ್ರಕಾರ ಎಲ್ಲ ಆಕಾಶಕಾಯಗಳ ಪರಿಭ್ರಮಣೆಯ ದಿಕ್ಕು ಒಂದೇ ಆಗಿದೆ; ಕೇಂದ್ರಸಮೀಪ ಕಾಯಗಳ ಪರಿಭ್ರಮಣವೇಗ ದೂರದವುಗಳಿಗಿಂತ ಅಧಿಕ. ಪ್ರತ್ಯಕ್ಷ ವೀಕ್ಷಣೆಗಳಿಂದ ಮೊದಲನೆಯದು ದೃಢಪಟ್ಟಿದೆ; ನಕ್ಷತ್ರಗಳ ಚಲನೆಯ ದಿಕ್ಕುಗಳು ಧನೂರಾಶಿಯೆಡೆಗೆ (ಆಕಾಶಗಂಗೆಯ ಪ್ರತಿಕೇಂದ್ರ) ಒಲವು ತೋರಿಸಿವೆ ಎಂದು ತಿಳಿದಿದೆ. ಸೂರ್ಯನಿಗೆ ಈ ಚಲನೆಯ ವೇಗ ಸೆಕೆಂಡಿಗೆ 64ಕಿ.ಮೀಗಳ ವೇಗದಲ್ಲಿ ಆಕಾಶದಲ್ಲಿ ಪರಿಭ್ರಮಿಸುತ್ತಿದೆ. ಒಂದು ಪರಿಭ್ರಮಣೆ ಮುಗಿಸಲು ಸೂರ್ಯನಿಗೆ ಬೇಕಾಗುವ ಅವಧಿ ಸುಮಾರು 2x108 ವರ್ಷಗಳು. ಈ ಅವಧಿಯನ್ನು ಒಂದು ವಿಶ್ವವರ್ಷ (ಕಾಸ್ಮಿಕ್ ಇಯರ್) ಎಂದು ಕರೆಯುವುದಿದೆ. ಆಕಾಶಗಂಗೆಯ ವಿವಿಧ ಕಾಯಗಳ ಪರಿಭ್ರಮಣ ವೇಗದಲ್ಲಿ ಗಮನಾರ್ಹವಾದ ಅಸಮಾಂಗತ್ವವಿದೆ. ಕೇಂದ್ರ ಸಮೀಪ ಕಾಯಗಳ ಪರಿಭ್ರಮಣವೇಗ ಕೇಂದ್ರ ದೂರ ಕಾಯವಾದ ಸೂರ್ಯನ ವೇಗಕ್ಕಿಂತ ವಿಶೇಷ ಹೆಚ್ಚೇನೂ ಇಲ್ಲ. ಇದರ ಕಾರಣ ಪ್ರಾಯಶಃ ಆಕಾಶಗಂಗೆಯ ಸಡಿಲವಾದ ಜೋಡಣೆಗೆ ಮತ್ತು ಅದರಿಂದ ಉಂಟಾಗುವ ದುರ್ಬಲ ಗುರುತ್ವಾಕರ್ಷಣ ವಲಯ. ಇಂಥ ವಲಯದಲ್ಲಿ ಸೆಕೆಂಡಿಗೆ 322-483ಕಿ.ಮೀ ವೇಗದಲ್ಲಿ ಪರಿಭ್ರಮಿಸುವ ನಕ್ಷತ್ರಗಳಿದ್ದರೆ ಅವು ಆಕಾಶಗಂಗೆಯ ವಲಯದಿಂದ ಬಿಡುಗಡೆ ಹೊಂದಿ ವಿಶಾಲ ವಿಶ್ವದಲ್ಲಿ ಮರೆಯಾಗಬಹುದು. 

 ದ್ರವ್ಯರಾಶಿ :  
ಕೇಂದ್ರದಿಂದ ಸೂರ್ಯನ ಕಕ್ಷೆಯವರೆಗೆ ವ್ಯಾಪಿಸಿರುವ ಆಕಾಶಗಂಗೆಯ ದ್ರವ್ಯರಾಶಿ 1.6x1011 ಸೂರ್ಯದ್ರವ್ಯರಾಶಿಯಷ್ಟು. ಇದರಿಂದ ಹೊರಗಿನ ವಲಯದ ದ್ರವ್ಯರಾಶಿ ಇದಕ್ಕಿಂತ ಕಡಿಮೆ. ಆದ್ದರಿಂದ ಆಕಾಶಗಂಗೆಯ ಒಟ್ಟು ದ್ರವ್ಯರಾಶಿ 2x1011 ಸೂರ್ಯದ್ರವ್ಯರಾಶಿಯಷ್ಟು ಎಂದು ಅಂದಾಜು ಮಾಡಲಾಗಿದೆ. 
ಇತ್ತೀಚಿನ ದಿನಗಳಲ್ಲಿ ಆಕಾಶಗಂಗೆಯ ಹೊರಭಾಗದಲ್ಲಿ ಅದೃಶ್ಯವಸ್ತು ಹೇರಳವಾಗಿರಬಹುದೆಂಬ ವಾದ ಕೇಳಿಬರುತ್ತಿದೆ. ಗ್ಯಾಲಕ್ಸಿಯ ಆವರ್ತನೆಯನ್ನು ಸಾಧಾರಣ ಭೌತನಿಯಮಗಳಿಂದ ವಿವರಿಸಲಾಗಿರುವುದೇ ಈ ಪರಿಕಲ್ಪನೆಗೆ ಕಾರಣವಾಯಿತು. ಆಚಿಡಿಞ ಒಚಿಣಣeಡಿ ಎನ್ನುವ ಈ ವಸ್ತು ಗ್ರಹಗಳು, ನ್ಯೂಟ್ರಾನ್ ನಕ್ಷತ್ರಗಳು, ಕಂದು ಕುಬ್ಜಗಳಿಂದಾಗಿರಬಹುದೇ ಎಂಬ ಊಹೆಯೂ ಇದೆ.

 ಪ್ರಾಯ :  
1940 ರಲ್ಲಿ ಬಾಡೆ ಮಂಡಿಸಿದ ಒಂದು ಸೂಚನೆಯ ಪ್ರಕಾರ ಆಕಾಶ ಗಂಗೆಯಲ್ಲಿ ಎರಡು ಭಿನ್ನವರ್ಗಗಳ ನಕ್ಷತ್ರಗಳಿವೆ. ಒಂದನೆಯ ವರ್ಗದವು ಹೊರವಲಯದ ಸುರುಳಿ ಕೈಗಳ ಅಂತರನಕ್ಷತ್ರ ಅನಿಲ, ವಿಶ್ವದೂಳು ಮತ್ತು ನೀಲಬಿಳಿ ಬಣ್ಣದ ಮಹಾದೈತ್ಯ ನಕ್ಷತ್ರಗಳು. ಈ ದೈತ್ಯನಕ್ಷತ್ರಗಳು ಏಕಾಂಗಿಯಾಗಿ ಅಥವಾ ಗುಂಪುಗುಂಪಾಗಿ ಹರಡಿವೆ. ವಿಶ್ವದ ಪ್ರಾಯದ ಅಳತೆಯಲ್ಲಿ ಇವೆಲ್ಲ ತರುಣ ಕಾಯಗಳು- ಇವುಗಳ ಪ್ರಾಯ ಸುಮಾರು 10 ಮಿಲಿಯನ್‍ನಿಂದ 100 ಮಿಲಿಯನ್ ವರ್ಷಗಳು. ಇದು ಭೂಮಿ, ಸೂರ್ಯರ ಪ್ರಾಯದ 1/100 ರಷ್ಟು. ಎರಡನೆಯ ವರ್ಗದ ನಕ್ಷತ್ರಗಳಿಗೆ ಹೆಚ್ಚು ಪ್ರಾಯವಾಗಿದೆ. ಇವುಗಳಲ್ಲಿ ಅತ್ಯಧಿಕ ಪ್ರಾಯದವು 10 ಬಿಲಿಯನ್ ವರ್ಷಗಳ ಹಿಂದೆಯೇ ಜನಿಸಿರಬಹುದು. ಆದರೆ ಈ ವರ್ಗದ ಎಲ್ಲ ನಕ್ಷತ್ರಗಳ ವ್ಯಾಪ್ತಿ ಆಕಾಶಗಂಗೆಯ ವಿರಳ ಹೊರವಲಯದಿಂದ ನಿಬಿಡ ಕೆಂದ್ರ ವಲಯದವರೆಗೆ ಇದೆ. ಹೆಚ್ಚಿನವು ಗೋಳಗುಚ್ಛಗಳಲ್ಲಿ ಅಡಕವಾಗಿವೆ.

ಪ್ರಾಚೀನ ಕಲ್ಪನೆ : ಕಂಡ ದೃಶ್ಯಕ್ಕೆ ಕಲ್ಪನೆಯ ಮೆರುಗನ್ನು ಪ್ರಾಚೀನ ಮಾನವ ನೀಡಿದ್ದಾನೆ. ಇಂಥ ಒಂದು ಕಲ್ಪನೆಯ ಪ್ರಕಾರ ವಿಷ್ಣುಪಾದೋದ್ಭವೆ ದೇವಗಂಗೆ ಉತ್ತರದ ಹಿಮವತ್ಪರ್ವತದೆಡೆಗೆ ಹರಿದಿದೆ. ಅದ್ದರಿಂದ ಇದರ ಹೆಸರು ಆಕಾಶಗಂಗೆ. ಅಲ್ಲಿ ಅದು ಭೂಮಿಯ ಹರನ ಜಡೆಯಿಂದ ಇಳಿದಿದೆ. ಹಿಮವತ್ಪರ್ವತದ ಬಣ್ಣವೂ ಬಿಳಿ. ಇನ್ನೊಂದು ಕಲ್ಪನೆಯ ಪ್ರಕಾರ ಆಕಾಶ ದೇವತೆ ಧನೂರಾಶಿಯ ಚಮಚದಿಂದ (ಈ ರಾಶಿಯ ಐದು ಸ್ಪಷ್ಟ ನಕ್ಷತ್ರಗಳು ಚಮಚದ ಆಕಾರ ರಚಿಸುತ್ತವೆ) ಮಗುವಿಗೆ ಹಾಲೂಡಿಸುವಾಗ ಚೆಲ್ಲಿದ ಹಾಲು ಬಾನ ಹಲಗೆಯ ಮೇಲೆ ಪಸರಿ ಕ್ಷೀರಪಥ ಅಥವಾ ಮಿಲ್ಕೀವೇ ಆಯಿತು.
(ನೋಡಿ- ನಕ್ಷತ್ರ-ಲೋಕ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ